ನಿರ್ಭೀತ ಯೋಧ ಲೆಫ್ಟಿನಂಟ್ ಅರುಣ್ ಖೇತ್ರಪಾಲ್
ಭಾರತೀಯ ಸೈನ್ಯದ ವೀರರ ಯಾವುದೇ ಕಥೆಗಳು ಕೆಲವು ಶಬ್ದಗಳಲ್ಲಿ ವರ್ಣಿಸುವಂತದ್ದಲ್ಲ.ಒಬ್ಬೊಬ್ಬ ವೀರರ ಹೆಸರುಗಳಲ್ಲೇ ಒಂದೊಂದು ಕಥೆಗಳು ಅಡಗಿವೆ. ಅಪರಿಮಿತ ಸಾಹಸ ಧೈರ್ಯ ಮತ್ತು ತ್ಯಾಗದ ಒಂದೊಂದು ಕಥೆಗಳೂ ಇತಿಹಾಸದ ಪುಟಗಳಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಂತಹ ದಂತ ಕಥೆಗಳಾಗಿವೆ.ಬಲಿದಾನ ಮತ್ತು ತ್ಯಾಗದ ವಿಷಯ ಬಂದಲ್ಲಿ ಭಾರತೀಯ ಸೈನಿಕರಿಗೆ ಸರಿಸಾಟಿ ಯಾರೂ ಇಲ್ಲ. ಯುದ್ಧಗಳಲ್ಲಿ ಇಂತಹಾ ಸಂದರ್ಭ ಬಂದರೂ ಎದುರಿಸುವವರೇ ಹೊರತು ಭಾರತೀಯ ಸೈನಿಕರು ಯುದ್ಧ ರಂಗಕ್ಕೆ ಬೆನ್ನು ತೋರಿಸಿದ ಉದಾಹರಣೆಯನ್ನು ಇತಿಹಾಸದ ಪುಟಗಳಲ್ಲಿ ಎಷ್ಟು ಹುಡುಕಿದರೂ ಸಿಗಲಾರದು.ಅಂತಹಾ ವೀರರಲ್ಲಿ ಕೇವಲ ೨೧ ರ ಕಿರಿಯ ವಯಸ್ಸಿನಲ್ಲಿಯೇ ಮರಣೋತ್ತರವಾಗಿ ಪರಮ ವೀರ ಚಕ್ರ ಪದಕದಿಂದ ಪುರಸ್ಕೃತರಾದ ಲೆಫ್ಟಿನಂಟ್ ಅರುಣ್ ಖೇತ್ರಪಾಲ್ ಕೂಡ ಒಬ್ಬರು.
೧೯೫೦ ರ ಅಕ್ಟೋಬರ್ ೧೪ ರಂದು ಮಹಾರಾಷ್ಟ್ರದ ಪುಣೆಯಲ್ಲಿ ಬ್ರಿಗೇಡಿಯರ್ ಎಂ.ಎಲ್ ಖೇತ್ರಪಾಲರ ಮಗನಾಗಿ ಜನಿಸಿದ ಅರುಣ್ ಖೇತ್ರಪಾಲ್ ಅವರು ೧೯೨೧ ರಲ್ಲಿ ಭಾರತೀಯ ಸೈನ್ಯದಲ್ಲಿ ಸೇರ್ಪಡೆಗೊಂಡರು.ಡೆಹ್ರಾಡೂನ್ ನ ಭಾರತೀಯ ಮಿಲಿಟರಿ ಅಕ್ಯಾಡಮಿಗೆ ಆಯ್ಕೆಯಾಗಿ ತರಬೇತಿಯನ್ನು ಪಡೆದ ಬಳಿಕ ಜೂನ್ ೧೯೭೧ ರಲ್ಲಿ ೧೭ ಪೂನಾ ಅಶ್ವದಳದಲ್ಲಿ ನೇಮಕಾತಿಯನ್ನು ಹೊಂದಿದರು.೧೯೭೧ ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಅರುಣ್ ಖೇತ್ರಪಾಲ್ ಅವರು ಸೇವೆಯನ್ನು ಸಲ್ಲಿಸುತ್ತಿದ್ದ ಅಶ್ವದಳವನ್ನು ೪೭ ಪದಾತಿದಳದ ಸಹಾಯಕ್ಕಾಗಿ ನಿಯೋಜಿಸಲಾಯಿತು.ಡಿಸೆಂಬರ್ ೧೫ ರಂದು ದಿನಪೂರ್ತಿ ಶ್ರಮವಹಿಸಿ ಬಸಂತರ್ ನದಿಗೆ ಸೇತುವೆಯನ್ನು ನಿರ್ಮಿಸಿ ಯುದ್ಧ ಟ್ಯಾಂಕರ್ ಗಳು ನದಿದಾಟಿ ಯುದ್ಧಭೂಮಿಗೆ ನುಗ್ಗಲು ಅನುವು ಮಾಡಿಕೊಡುವುದು ಇವರ ಕರ್ತವ್ಯವಾಗಿತ್ತು.
ಮರುದಿನ ಡಿಸೆಂಬರ್ ೧೬ ರಂದು ಭಾರತೀಯ ಸೈನ್ಯದ ಮೇಲೆ ಪಾಕಿಸ್ತಾನಿ ಸೈನ್ಯ ದಾಳಿ ನಡೆಸಿದಾಗ ಅರುಣ್ ಖೇತ್ರಪಾಲ್ ಅವರು ಕರ್ನಲ್ ಹನುತ್ ಸಿಂಗರ ಮಾರ್ಗದರ್ಶನದಲ್ಲಿ ಪಾಕಿಸ್ತಾನದ ಟ್ಯಾಂಕರ್ ಗಳನ್ನು ಛಿದ್ರಗೊಳಿಸಿದರು.ಪಾಕಿಸ್ತಾನವು ಫಿರಂಗಿ ದಳದ ಮುಖಾಂತರ ಬಲವಾದ ಮರುದಾಳಿಯನ್ನು ಮಾಡಿದಾಗ ಅರುಣ್ ಖೇತ್ರಪಾಲ್ ಟ್ಯಾಂಕ್ಗಳಿಂದ ಅವರನ್ನು ಎದುರಿಸಿದರು.ಭಾರತೀಯ ಸೈನ್ಯದ ಉಳಿದ ಟ್ಯಾಂಕರ್ಗಳು ಜಖಂ ಗೊಂಡರೂ ಲೆಕ್ಕಿಸದೆ ಏಕಾಂಗಿಯಾಗಿ ತಮ್ಮ “ಫರಾಮಗುಸ್ತ”ಟ್ಯಾಂಕ್ ಅನ್ನು ಮುನ್ನಡೆಸುತ್ತಾ ಶತ್ರುಗಳ ದಾಳಿಯನ್ನು ಎದುರಿಸಿದರು. ಸ್ವತಹ ಗಾಯಗೊಂಡಿದ್ದರೂ ಲೆಕ್ಕಿಸದೆ,ಹಿಂಜರಿಯದೆ ತಮ್ಮ ಸಹ ಸೈನಿಕರ ಟ್ಯಾಂಕರ್ಗಳನ್ನು ಕೂಡಾ ಮುನ್ನಡೆಸಲು ಮುಂದಾಗಿದ್ದರು.ಅರುಣ್ ರ ಬಲಹೀನ ದೇಹಸ್ಥಿತಿ ಮತ್ತು ಹೊತ್ತಿ ಉರಿಯುತ್ತಿದ್ದ ಟ್ಯಾಂಕರ್ನ ದುರವಸ್ಥೆಯನ್ನು ಅರಿತ ಮೇಲಧಿಕಾರಿಯು ಟ್ಯಾಂಕರ್ ನಿಂದ ಹೊರಬಂದು ರಕ್ಷಣೆ ಪಡೆಯುವಂತೆ ಸಲಹೆ ನೀಡಿದಾಗ ಅರುಣ್ ಖೇತ್ರಪಾಲ್ ನೀಡಿದ ಉತ್ತರವು ಭಾರತೀಯ ಸೈನಿಕನು ಮಾತ್ರವೇ ನೀಡಬಲ್ಲ ಉತ್ತರವಾಗಿತ್ತು . ಅರುಣ್ ಖೇತ್ರಪಾಲ್ ಅವರು “ ಶತ್ರುಗಳ ಎಲ್ಲಾ ಟ್ಯಾಂಕರ್ಗಳನ್ನು ಧ್ವಂಸಗೊಳಿಸದೆ ನಾನು ಹಿಂತಿರುಗಲಾರೆ” ಎಂಬ ಉತ್ತರವನ್ನು ನೀಡಿದ್ದರು.ಕೇವಲ ೧೦೦ ಮೀಟರ್ ಅಂತರದಲ್ಲಿದ್ದಾಗಲೂ ಸಹ ಧೈರ್ಯದಿಂದ ಪಾಕಿಸ್ಥಾನೀ ಟ್ಯಾಂಕ್ ಗಳತ್ತ ಗುಂಡನ್ನು ತ್ತೂರುತ್ತಿದ್ದ ಅರುಣ್ ರ ಸಾಹಸವನ್ನು ಕಂಡು ಪಾಕಿಸ್ತಾನೀ ಸೈನಿಕರು ಕಕ್ಕಾಬಿಕ್ಕಿಯಾಗಿದ್ದರು. ಕೊನೆಗೆ ಪಾಕಿಸ್ತಾನಿ ಕಪ್ತಾನ ಕ್ವಾಜಾ ಮೊಹಮ್ಮದ್ ನಾಸಿರ್ ರ ಟ್ಯಾಂಕ್ ಅನ್ನು ಧ್ವಂಸಗೊಳಿಸಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ,ನಾಸಿರ್ ರ ಟ್ಯಾಂಕ್ ದಾಳಿಯಲ್ಲಿ ಅರುಣ್ ಖೇತ್ರಪಾಲ ಹುತಾತ್ಮರಾದರು.
ಡಿಸೆಂಬರ್ ೧೭ ರಂದು ಅರುಣ್ ಖೇತ್ರಪಾಲರ ಅಂತ್ಯಸಂಸ್ಕಾರವನ್ನು ಸಾಂಬಾ ಜಿಲ್ಲೆಯಲ್ಲಿ ಸಕಲ ಗೌರವಗಳೊಂದಿಗೆ ನೆರವೇರಿಸಲಾಯಿತು.ಯುದ್ಧದ ತರುವಾಯು ಫರಾಮಗುಸ್ತ ಟ್ಯಾಂಕರ್ ನ ಕುರಿತಾಗಿ ವಿವರಿಸುತ್ತಾ ,ಪಾಕಿಸ್ತಾನದ ಸೇನಾ ಕಮಾಂಡರ್ ಭಾರತೀಯ ಕಮಾಂಡರ್ ನ ಬಳಿಯಲ್ಲಿ “ ಆ ಟ್ಯಾಂಕರ್ ನ ದಾಳಿಯಿಂದಾಗಿ ಯುದ್ಧದಲ್ಲಿ ನಾವು ಹಿಮ್ಮೆಟ್ಟಿದೆವು” ಎಂದು ಹೇಳಿದ್ದರು. ಹಲವು ವರ್ಷಗಳ ಬಳಿಕ ೨೦೦೧ ರಲ್ಲಿ ಅರುಣ್ ಖೇತ್ರಪಾಲರ ತಂದೆ ಬ್ರಿಗೇಡಿಯರ್ ಎಂ.ಎಲ್ ಖೇತ್ರಪಾಲ್ ಅವರು ತಮ್ಮ ಹುಟ್ಟೂರಾದ ಪಾಕಿಸ್ತಾನದ ಸರ್ಘೋಡಾಗೆ ಭೇಟಿ ನೀಡಿದಾಗ ಪಾಕಿಸ್ತಾನದ ಕಾಪ್ಟನ್ ಮೊಹಮ್ಮದ್ ನಾಸಿರ್ ಖುದ್ದು ಖೇತ್ರಪಾಲರ ಆಥಿತ್ಯವನ್ನು ವಹಿಸಿಕೊಂಡು ಸೈನಿಕ ಬದುಕಿನ ಪೌರುಷಕ್ಕೆ ನಿದರ್ಶನ ಎಂದು ಅರುಣ್ ಖೇತ್ರಪಾಲರ ಸಾಹಸವನ್ನು ಕೊಂಡಾಡಿದರು.ವೀರ ಮರಣವನ್ನಪ್ಪಿ ಹಲವಾರು ವರುಷಗಳ ಬಳಿಕವೂ ಶತ್ರುಗಳ ಮನಸ್ಸಿನಲ್ಲಿಯೂ ಎತ್ತರದ ಸ್ಥಾನದಲ್ಲಿರುವಂತಹಾ ಅಪ್ರತಿಮ ಸಾಹಸಿ ಅರುಣ್ ಖೇತ್ರಪಾಲ್ ಅವರು ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಲು ಸಾಧ್ಯವಾದದ್ದು ಕೇವಲ ೬ ತಿಂಗಳ ಕಾಲ ಮಾತ್ರ.ತನ್ನ ೨೧ ನೇ ವಯಸ್ಸಿನಲ್ಲಿ ಹುತಾತ್ಮರಾದ ಅರುಣ್ ಖೇತ್ರಪಾಲರನ್ನು ಭಾರತಸರ್ಕಾರವು ಮರಣೋತ್ತರ ಪರಮ ವೀರ ಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿತು.