ಅವಳ ಬರಿದೇ ಹೆಣ್ಣೆಂದರೆ ಅಷ್ಟೇ ಸಾಕೇ?
ಅವಳು ಕ್ಷಮೆಯಲ್ಲಿ ಧರಿತ್ರಿಯಾಗಬಲ್ಲವಳಾದರೆ
ರಕ್ಕಸರ ಮಟ್ಟಹಾಕಲು ದುರ್ಗೆಯ ಅವತಾರವನ್ನೂ ಎತ್ತಬಲ್ಲಳು
ಅವಳು ಕಾರ್ಯದಲ್ಲಿ ದಾಸಿಯಾದರೆ
ಶತ್ರುಗಳ ಮಣ್ಣುಮುಕ್ಕಿಸಲು
ರಾಣಿ ಲಕ್ಷ್ಮೀಬಾಯಿಯ ರೂಪವನ್ನೂ ಧರಿಸಬಲ್ಲಳು
ಅವಳು ಭೋಜನ ನೀಡುವಾಗ ಮಾತೆಯಾದರೆ
ತನ್ನ ಮಾನಹಾನಿಗೆ ಪ್ರತೀಕಾರ ತೀರಿಸುವ ಪ್ರತಿಜ್ಞೆಗೈದ ದ್ರೌಪದಿಯೂ ಆಗಬಲ್ಲಳು
ಅವಳು ಗೃಹವನ್ನು ಮುನ್ನಡೆಸುವ ಗೃಹಲಕ್ಷ್ಮಿ ಆಗಬಲ್ಲಳಾದರೆ
ಸ್ವತಂತ್ರ ಸಂಗ್ರಾಮವನ್ನು ಮುನ್ನಡೆಸುವ ಲಕ್ಷ್ಮಿ ಸಹಗಲ್ ರೂಪವನ್ನೂ ಧರಿಸಬಲ್ಲಳು
ಅವಳು ನಿಮ್ಮ ಸಂಕಷ್ಟದಲ್ಲಿ ಹೆಗಲಾಗಬಲ್ಲಳಾದರೆ
ಅವಳಿಗೆ ಸಂಕಷ್ಟ ನೀಡಿದ ವ್ಯಕ್ತಿಯನ್ನು ಮೆಟ್ಟಿ ಮುನ್ನಡೆಯಬಲ್ಲಳು
ನೀವು ಅವಳನ್ನ ತುಳಿಯಲು ಪ್ರಯತ್ನಿಸಿದಷ್ಟೂ ಅವಳು ಬೆಳೆಯಬಲ್ಲಳು, ಅವಳು ಹೆಮ್ಮರವಾಗಿ ನೆರಳನ್ನು ನೀಡಬಲ್ಲಳು
ಅವಳು ಬೆಳಕಾಗಬಲ್ಲಳು, ಅವಳು ನಿಂತ ನೀರಲ್ಲ ಅವಳು ಹರಿಯುವ ತೊರೆಯಾಗಬಲ್ಲಳು,
ಅವಳು ಹಕ್ಕಿಯಾಗಿ ಹಾರಬಲ್ಲಳು, ಅವಳಿಗೆ ಆತ್ಮವಿಶ್ವಾಸವೇ ರೆಕ್ಕೆ
ಅವಳು ಅಗ್ನಿಯಂತೆ ಸುಡಬಲ್ಲಳು,
ಅವಳಿಗೆ ಅವಳ ಸ್ವಾಭಿಮಾನವೇ ರಕ್ಷೆ
ಅವಳು ಸಂಸಾರದ ನೌಕೆಯನ್ನು ಮುನ್ನಡೆಸುವಷ್ಟೇ ಸುಲಭವಾಗಿ
ಯುದ್ಧ ವಿಮಾನವನ್ನೂ ನಡೆಸಬಲ್ಲಳು
ಅವಳು ಒಲೆಯ ಬೆಂಕಿಯನ್ನು ಉರಿಸಿದಷ್ಟೇ ಸರಳವಾಗಿ
ಬಂದೂಕು ಹಿಡಿದು ದೇಶವನ್ನೂ ಕಾಯಬಲ್ಲಳು
ಅವಳು ಸ್ತ್ರೀ, ಆದರೆ ಅವಳನ್ನು ಸ್ತ್ರೀ ಎಂದರೆ ಅಷ್ಟೇ ಸಾಕೇ??