ಶಿಕ್ಷಕರ ದಿನಾಚರಣೆಯ ಶುಭಾಶಯಗಳು
ಶ್ರೀ ಗುರುಭ್ಯೋ ನಮಃ
ಕತ್ತಲೆ ಎಂಬುದು ಶಾಶ್ವತವಲ್ಲ ಎಂಬುದು ನಿಜ..ಪ್ರತಿ ರಾತ್ರೆಯೂ ಕಳೆದು ಸೂರ್ಯೋದಯವಾಗುವುದು ಕೂಡಾ ಸುಳ್ಳಲ್ಲ,ಆದರೆ ಅಜ್ಞಾನ ಎಂಬುದು ಮನುಷ್ಯನ ಜೀವನದ ಕತ್ತಲೆಯಾದರೆ ಜ್ಞಾನವೆಂಬ ಬೆಳಗನ್ನು ತರಬಲ್ಲ ಸಾಮರ್ಥ್ಯವಿರುವುದು ಗುರುವಿಗೆ ಮಾತ್ರ.ಅನಾದಿ ಕಾಲದಿಂದಲೂ ಭಾರತೀಯ ಸಂಸ್ಕೃತಿಯು ಗುರುವನ್ನು ದೇವರ ಸ್ಥಾನದಲ್ಲಿರಿಸಿ ಪೂಜಿಸುವುದನ್ನು ಕಲಿಸುತ್ತಿದೆ. "ಗುರು ದೇವೋ ಭವ" ಎನ್ನುವ ಮಾತು ಇಂದಿಗೂ ಸುಳ್ಳಾಗಲು ಸಾಧ್ಯವಿಲ್ಲ.ಪ್ರತಿಯೊಬ್ಬ ವ್ಯಕ್ತಿಯ ತಪ್ಪು ಒಪ್ಪುಗಳನ್ನು ತಿದ್ದಿ ತೀಡಿ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವ ವ್ಯಕ್ತಿಯೇ ಗುರು.ಪ್ರತಿಯೊಬ್ಬ ಶಿಷ್ಯನನ್ನೂ ತನ್ನ ಮಗುವಂತೆ ಕಂಡು ವಿದ್ಯೆ ಸಂಸ್ಕಾರವನ್ನು ನೀಡಿ ಅವನನ್ನು ಸಮಾಜಕ್ಕೆ ಒಂದು ಉತ್ತಮ ಪ್ರಜೆಯಾಗಿ ರೂಪುಗೊಳ್ಳುವಂತೆ ಮಾಡುವಲ್ಲಿ ಗುರುವಿನ ಪಾತ್ರ ಅತ್ಯಂತ ಮಹತ್ವದ್ದು.
ಪ್ರತಿಯೊಬ್ಬ ಗುರುವೂ ತನ್ನ ಶಿಷ್ಯರ ಜೀವನದಲ್ಲಿ ಒಂದು ಪ್ರಧಾನ ತಿರುವಿಗೆ ಕಾರಣರಾಗುತ್ತಾರೆ... ಸೇನೆಯ ಕುರಿತಾಗಿ ನನ್ನಲ್ಲಿರುವ ಅಪಾರ ಪ್ರೀತಿ ಗೌರವ ಹಾಗೂ ಆಸಕ್ತಿಗೆ ಕಾರಣ ನನ್ನ ಪ್ರಾಥಮಿಕ ಶಾಲಾ ವಿಜ್ಞಾನ ಶಿಕ್ಷಕರಾದ ವೇಣುಗೋಪಾಲ ಕೃಷ್ಣಾ ಎನ್ನುವ ಅಧ್ಯಾಪಕರು..ಸ್ವತಃ ಯೋಧರಾಗಿದ್ದ ಅವರು ಹೇಳುತ್ತಿದ್ದ ಕುತೂಹಲ ಕಾರೀ ಕಥೆಗಳು ನನ್ನಲ್ಲಿ ಬಹಳಷ್ಟು ಬದಲಾವಣೆಯನ್ನು ತಂದಿದ್ದು,ಅದು ಇಂದಿಗೂ ನನ್ನ ಕೈ ಹಿಡಿದು ಕರೆದೊಯ್ಯುತ್ತಿದೆ.ಪ್ರೌಢ ಶಾಲೆಯಲ್ಲಿ ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆಗಳಾಗಿದ್ದು ಸುಳ್ಳಲ್ಲ ನನ್ನ ಜೀವನದ ಶಿಸ್ತು ,ದೇಶಭಕ್ತಿ,ಸನಾತದ ಧರ್ಮದ ಕುರಿತಾದ ಆಸಕ್ತಿ ಜ್ಞಾನ ಎಲ್ಲವನ್ನೂ ನನ್ನ ಪ್ರೌಢ ಶಾಲೆಯ ಪ್ರತಿಯೊಬ್ಬ ಗುರುಗಳೂ ನೀಡಿದ ದಾನ.ತರಗತಿಯಲ್ಲಿ ಪ್ರಥಮ ಸ್ಥಾನ ಪಡೆಯುವುದು ಮಾತ್ರವಲ್ಲ,ಅಂಕ ಗಳಿಕೆ ಮಾತ್ರ ಜೀವನದ ಉದ್ದೇಶವಲ್ಲ ಎಂಬ ಸತ್ಯವು ನನಗೆ ಅರಿವಾದದ್ದು ಅಲ್ಲಿ.
ನನ್ನ ಜೀವನದಲ್ಲಿ ನನ್ನ ಪದವಿಪೂರ್ವ ಗಣಿತ ಶಿಕ್ಷಕರ ಪ್ರಭಾವ ಬಹಳ..ತನ್ನ ಪಾಠವನ್ನು ಚುರುಕಾಗಿ ಗ್ರಹಿಸಿ ತನಗೆ ಕೀರ್ತಿಯನ್ನು ತರುವ ವಿದ್ಯಾರ್ಥಿಯನ್ನು ಪ್ರೀತಿಸುವ ಬಹಳಷ್ಟು ಶಿಕ್ಷಕರು ಕಾಣ ಸಿಗಬಹುದು ,ಆದರೆ ತಾನು ಕಲಿಸುವ ವಿಷಯದ ಕುರಿತಾಗಿ ಎಳ್ಳಷ್ಟೂ ಆಸಕ್ತಿಯನ್ನು ಹೊಂದಿರದ ,ದಡ್ಡ ವಿದ್ಯಾರ್ಥಿಯನ್ನೂ ಅದೇ ಸಮನಾಗಿ ಪ್ರೀತಿಸಿ ಆ ವಿದ್ಯಾರ್ಥಿಯ ನೈಜ ಆಸಕ್ತಿಯನ್ನು ಗಮನಿಸಿ ಪ್ರೋತ್ಸಾಹಿಸುವುದು ಕೇವಲ ಕೆಲವೇ ಶಿಕ್ಷಕರಿಗೆ ಮಾತ್ರ ಸಾಧ್ಯ..ಆತ್ಮವಿಶ್ವಾಸ ಕಳೆದು ಹೋಗುತ್ತಿದ್ದ ದಿನಗಳಲ್ಲಿ ಆತ್ಮವಿಶ್ವಾಸ ತುಂಬಿದ ನನ್ನ ಗುರುವಿಗೆ ಸಾವಿರ ನಮನಗಳು..
ಜೀವನದ ಪ್ರತಿಯೊಂದು ಹಂತದಲ್ಲೂ ನಮಗೆ ಪಾಠವನ್ನು ಕಲಿಸುವ ಗುರುಗಳು ನಮ್ಮೊಂದಿಗೆ ಇರುತ್ತಾರೆ..ಪ್ರಕೃತಿ,ಮಗು ಹೀಗೆ ನಮ್ಮಲ್ಲಿ ಅಡಗಿರುವ ಚೈತನ್ಯವನ್ನು ಬಡಿದೆಬ್ಬಿಸಿ ಪ್ರೋತ್ಸಾಹಿಸುವ ಮಾರ್ಗದರ್ಶಕ ,ನಡೆಯಲು ಕಳಿಸಿದ ಪಾಲಕರು,ಮಾತು ಕಲಿಸಿದ ಪೋಷಕರು,ತಪ್ಪನ್ನು ತಿದ್ದಿ ಸರಿದಾರಿ ತೋರುವ ಸ್ನೇಹಿತ ,ಹಿತವಾಗಿ ಗದರಿ ಮುನ್ನಡೆಯಲು ಕೈ ಹಿಡಿದು ಕರೆದೊಯ್ಯುವ ಸಹೋದ್ಯೋಗಿ ಎಲ್ಲರಲ್ಲೂ ಗುರುವನ್ನು ಕಾಣಲು ಸಾಧ್ಯವಾದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜೀವನವೂ ಸುಂದರ ಹೂದೊಟವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಪ್ರತಿಯೊಬ್ಬನಲ್ಲೂ ಹೇಗೆ ಶಿಷ್ಯನಿದ್ದಾನೋ ಹಾಗೆಯೇ ಗುರುವೂ ಇದ್ದಾನೆ.. ತನ್ನನ್ನು ನೋಡಿ ಯಾರಾದರೂ ಉತ್ತಮವಾದದ್ದು ಕಲಿಯಲಿ ಎಂಬ ಜವಾಬ್ದಾರಿ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯೂ ಗುರುವೇ..ನನ್ನ ಜೀವನಲ್ಲಿ ಉತ್ತಮ ಬದಲಾವಣೆಗೆ ಕಾರಣರಾದ ಎಲ್ಲರಿಗೂ ಗೌರವಪೂರ್ವಕ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.